ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಪರಂಪರಾಗತ ಪದ್ಧತಿಗಳನ್ನು ಆಚರಿಸುವಲ್ಲಿ ಮತ್ತು ಅವನ್ನು ನಮ್ಮ ಮುಂದಿನ ಪೀಳಿಗೆಯವರಿಗೆ ಒಪ್ಪಿಸಿಕೊಡುವುದರಲ್ಲಿ ಎರಡು ರೀತಿಯ ಅಡಚಣೆಗಳು ಎದುರಾಗುತ್ತಿವೆ. ಮೊದಲನೆಯದಾಗಿ: ದೊಡ್ಡ ಮಟ್ಟದಲ್ಲಿ ಹೊರದೇಶದ ಹಣಬಲದಿಂದ ಸಾಂಸ್ಥಿಕವಾಗಿ ಧರ್ಮ-ಪರಿವರ್ತನಾ ಯುದ್ಧ ಘೋಷಿಸಲಾಗಿದೆ. ಎರಡನೆಯದಾಗಿ: ನಮ್ಮ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಜಾನಪದ ಕಟ್ಟುಪಾಡುಗಳ ಮೇಲೆ ಭಾರತ ಶಾಸನ ಮತ್ತು ನ್ಯಾಯಾಂಗದ ನಿರಂತರ ಆಕ್ರಮಣ. ಈ ಆಕ್ರಮಣದ ಮುಖ್ಯ ಶಸ್ತ್ರ ವಿದೇಶಿ ಹಣದ ಬಲದಿಂದ ಹೂಡಲಾಗುತ್ತಿರುವ PILಗಳು.

ನಮ್ಮ ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ತನ್ನ ಇಷ್ಟದಂತೆ ಧಾರ್ಮಿಕ ಪ್ರಸಾರ, ಆಚರಣೆ ಮತ್ತು ವಿಚಾರ-ಪ್ರದಾನ ಮಾಡುವ ಸಂಪೂರ್ಣ ಹಕ್ಕು ನೀಡಲಾಗಿದೆ. ಆದರೆ ಪ್ರತಿಯೊಬ್ಬರಿಗೆ ಪ್ರತ್ಯೇಕವಾಗಿ ನೀಡಿರುವ ಈ ರೀತಿಯ ಹಕ್ಕು ಸಾಂಸ್ಥಿಕವಾಗಿ ನಡೆಯುತ್ತಿರುವ ಧರ್ಮ-ಪರಿವರ್ತನಾ ಕಾರ್ಯಕ್ಕೆ ನೀಡಲಾಗಿಲ್ಲ. ವಿದೇಶಿ ಹಣದ ಬಲದಿಂದ ವಿವಿಧ ರೀತಿಯಲ್ಲಿ ಮುಗ್ಧ ಜನರ ಮನಃ ಪರಿವರ್ತನೆ ಮಾಡಿ ಅವರ ಧರ್ಮಕ್ಕೆ ಚ್ಯುತಿ ತರುವ ಕಾರ್ಯ ಭರದಿಂದ ಸಾಗಿದೆ. ಈ ರೀತಿಯ ಚಟುವಟಿಕೆಗಳು ನಮ್ಮ ಸಂಸ್ಕೃತಿ, ಧರ್ಮ ಮತ್ತು ನಾಗರೀಕತೆಯ ಮೇಲಿನ ಅಘೋಷಿತ ಯುದ್ಧ! ಈ ರೀತಿಯ ವ್ಯವಸ್ಥಿತ ಮತ್ತು ಸಾಂಸ್ಥಿಕ ಧರ್ಮ ಪರಿವರ್ತನಾ ದಾಳಿಯಿಂದ ಜಾನಪದ (native) ಧರ್ಮಗಳು, ಸಂಸ್ಕೃತಿಗಳು ಮತ್ತು ನಾಗರೀಕತೆಗಳು ಸಂಪೂರ್ಣವಾಗಿ ನಾಶವಾಗಿಹೋದ ಅನೇಕ ಉದಾಹರಣೆಗಳು ವಿಶ್ವದ ಇತಿಹಾಸದಲ್ಲಿ ಅನೇಕ ಸಂಖ್ಯಯಲ್ಲಿ ಲಭ್ಯವಿದೆ. ಸನಾತನ ಧರ್ಮದ ಬುನಾದಿಯಲ್ಲಿ ನೆಲೆನಿಂತಿರುವ ನಮ್ಮ ಅತಿ ಪುರಾತನ ನಾಗರೀಕತೆ ಈಗ ಅನೇಕ ರೀತಿಯ ಧರ್ಮ ಪರಿವರ್ತನಾ ಸಂಘಗಳ ಆಕ್ರಮಣಕ್ಕೆ ಗುರಿಯಾಗಿದೆ. ಒಂದು ಕಡೆ ಪ್ರತಿಯೊಬ್ಬ ಪ್ರಜೆಗೂ ತನ್ನ ಧರ್ಮ ಪಾಲಿಸುವ ಮತ್ತು ಪ್ರಚಾರ ಮಾಡುವ ಹಕ್ಕು – ಇನ್ನೊಂದೆಡೆ ಭಾರತ ಸರಕಾರದ ನಾಗರೀಕ ಜವಾಬ್ದಾರಿಯಾದ ಧರ್ಮ ಮತ್ತು ಸಂಸ್ಕೃತಿ ಉಳಿಸುವ ಬೆಳೆಸುವ ಪೋಷಿಸುವ ಕೆಲಸ. ಈ ಎರಡನ್ನೂ ಒಟ್ಟಿಗೆ ಕೂಡಿಸಿಕೊಂಡು ಮುಂದೆ ಸಾಗಬೇಕಾದರೆ ಇರುವುದೊಂದೇ ಸುಲಭದ ದಾರಿ. ಹೊಸ ಕಾನೂನೊಂದು ಜಾರಿಗೆ ತಂದು ಪ್ರಜೆಗಳಿಗೆ ಅವರ ಸ್ವಂತದ ಧರ್ಮ ಪಾಲನೆ ಮತ್ತು ಪ್ರಚಾರಕ್ಕೆ ಸಂಪೂರ್ಣ ಅಧಿಕಾರ ನೀಡುವುದು. ಅದೇ ಸಮಯದಲ್ಲಿ ಸಾಂಸ್ಥಿಕವಾಗಿ ಧರ್ಮ ಪರಿವರ್ತನಾ ಕಾರ್ಯವನ್ನು ನಿಷೇಧಗೊಳಿಸುವುದು. ನಮ್ಮ ಧರ್ಮ, ಸಂಸ್ಕೃತಿ, ಕಟ್ಟುಪಾಡುಗಳು ಮತ್ತು ನಾಗರೀಕತೆಯನ್ನು ನಾಶ ಮಾಡುವ ಯಾವುದೇ ಪ್ರಯತ್ನಕ್ಕೆ ಅವಕಾಶ ನೀಡದೇ ಇರುವುದು.

ನಮ್ಮ ದೇಶದಲ್ಲಿ ವಿಶೇಷವಾಗಿ ಹಿಂದೂ ಸಮುದಾಯದಲ್ಲಿ ಅನೇಕ ರೀತಿಯ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ವಿವಿಧತೆ ಕಾಣಬರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಆಚಾರ-ವಿಚಾರಗಳ ವಿರುದ್ಧ ನ್ಯಾಯಾಲಯಗಳಲ್ಲಿ ಸವಾಲು ಹೂಡಲಾಗುತ್ತಿದೆ. ಅನೇಕ ಪ್ರಕರಣಗಳಲ್ಲಿ ಈ ರೀತಿಯ ಮೊಕದ್ದಮೆ ಹೂಡುವವರು ಇಲ್ಲಿನ ಸಂಸ್ಕೃತಿಗೆ ಯಾವುದೇ ರೀತಿಯ ನಂಟು ಇರದ ಮತ್ತು ವಿದೇಶಿ ತಾಕತ್ತುಗಳ ಪಂಜದಲ್ಲಿ ಸಿಲುಕಿರುವ ಜನರು ಮತ್ತು ಸಂಸ್ಥೆಗಳು. ಬೇರೆ ಧರ್ಮ ಮತ್ತು ಪಂಥಗಳಂತೆ ಹಿಂದೂ ಧರ್ಮದಲ್ಲಿ ಒಂದೇ ಪುಸ್ತಕೆದಲ್ಲಿ ಬರೆದ ವಿಷಯಗಳನ್ನೇ ಪಾಲಿಸ ಬೇಕೆಂಬ ಕಟುನಿಯಮವಿಲ್ಲ. ನಮ್ಮ ಸಂಪ್ರದಾಯದಲ್ಲಿ ದೇಶ, ಕಾಲ ಮತ್ತು ಜನರ ಸ್ವಭಾವಕ್ಕೆ ಅನುಗುಣವಾಗಿ ಕಟ್ಟುಪಾಡುಗಳು, ಸಂಪ್ರದಾಯಗಳು, ಹಬ್ಬಗಳು ಬೆಳೆದುಕೊಂಡಿವೆ. ಈ ನಿಯಮಗಳು ಮತ್ತು ಆಚರಣೆಗಳು ಯಾವುದೇ ಒಂದು ಪುಸ್ತಕದಲ್ಲಿ ದಾಖಲೆಯಾಗಿ ಸಿಗದೇ ಸಾವಿರಾರು ವರ್ಷಗಳಿಂದ ಜನರಿಂದ ಜನರಿಗೆ ಬಳುವಳಿಯಾಗಿ ಬಂದಿವೆ. ಇದೇ ನಮ್ಮ ಪರಂಪರೆ. ಶತಮಾನಗಳಿಂದ ಬಂದಿರುವ ಈ ಪರಂಪರೆಗಳು ನಮಗೆ ಅತಿ ಬೆಲೆಬಾಳುವ ವಸ್ತುಗಳು. ಇವುಗಳನ್ನು ಹೊರಗಿನವರ ದೃಷ್ಟಿಯಿಂದ ನೋಡುವ ಅವಶ್ಯಕತೆಯಿಲ್ಲ. ಮೊದಲಿಗೆ ‘ವೈಜ್ಞಾನಿಕ’ ವಿಚಾರದ ಆಧಾರದ ಮೇರೆಗೆ ಸರಿಯಲ್ಲ ಎಂದು ಘೋಷಿಸಲಾದ ನಮ್ಮ ಅನೇಕ ಆಹಾರಕ್ರಮಗಳನ್ನು ಪುನಃ ಕೆಲವು ವರ್ಷಗಳ ನಂತರ ಅತ್ಯಂತ ಉಪಯುಕ್ತ ಎಂದು ವಿದೇಶಿ ವ್ಯವಸ್ಥೆಗಳು ಘೋಷಿಸುತ್ತಿವೆ. ಆದರೆ ನಮ್ಮಲ್ಲಿ ಪಾಶ್ಚಾತ್ಯ ಗುಲಾಮಗಿರಿಯ ಮನಸ್ಸುಳ್ಳ ಅನೇಕರು, ಮಾಧ್ಯಮದ ದುಷ್ಪ್ರಚಾರದಿಂದಾಗಿ, ಈ ಆಚರಣೆಗಳನ್ನು ಅವಿದ್ಯೆ, ಮೂಡನಂಬಿಕೆ, ಕ್ರೂರತನ ಮುಂತಾದ ನಾಮ ನೀಡಿ, ನ್ಯಾಯಾಲಯಗಳಲ್ಲಿ PIL ಮೊಕದ್ದಮೆಗಳನ್ನು ಹೂಡಿ ಈ ಆಚರಣೆಗಳನ್ನು ನಡೆಸದಂತೆ ಆದೇಶಗಳನ್ನು ತರುತ್ತಿದ್ದಾರೆ. ಪರಂಪರೆಗಳಿಗೆ ಹೊರಗಿನ ಪುರಾವೆಗಳ ಅಗತ್ಯವಿಲ್ಲ. ಅದಲ್ಲದೇ ನಮ್ಮ ಹಿಂದೂ ಸಮಾಜದಲ್ಲೇ ಆಚರಣೆಗಳನ್ನು ಕಾಲಕ್ಕೆ ತಕ್ಕಂತೆ ಪರಿವರ್ತನೆ, ಸಂಶೋಧನೆ ಗೊಳಿಸುವ ಜ್ಞಾನವುಳ್ಳ ವಿದ್ವಾಂಸರು ಪಂಡಿತರು ಇದ್ದಾರೆ. ಈ ಹೊಣೆಗಾರಿಕೆಯನ್ನು ನ್ಯಾಯಾಲಯಗಳು ಹೊರುವುದು ಅನವಶ್ಯಕ.

ನಮ್ಮ ಪರಂಪರಾಗತ ಧರ್ಮಾಚರಣೆಗಳು, ಸಾಂಸ್ಕೃತಿಕ ಕಲೆಗಳು ಮತ್ತು ಜಾನಪದ ವಿದ್ಯೆಗಳು ನ್ಯಾಯಾಲಯಗಳ ಹಸ್ತಕ್ಷೇಪದಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿವೆ. ವಿಶ್ವದಲ್ಲೇ ಅನನ್ಯವಾದ ನಮ್ಮ ಸಂಸ್ಕೃತಿ ನಮ್ಮ ದೇಶದ ವಿವಿಧತೆಯನ್ನು ಗಣನೆಯಲ್ಲಿಟ್ಟು ಆವಿಷ್ಕಾರ ಮಾಡಲಾಗಿತ್ತು. ಇವುಗಳ ವಿಷಯದಲ್ಲಿ ವಿನಾಕಾರಣ ಹಸ್ತಕ್ಷೇಪದಿಂದ ಸಮಾಜದಲ್ಲಿ ಅಸಹಿಷ್ನುತೆ ಹೆಚ್ಚಾಗುತ್ತಿದೆ. ಜನರ ಮನಸ್ಸಿನಲ್ಲಿ ಆಕ್ರೋಶ ಉಲ್ಬಣಗೊಳ್ಳುತ್ತಿದೆ. ಜಲ್ಲಿಕಟ್ಟು, ದಹಿ ಹಂಡಿ, ಶಬರಿಮಲೈ, ಶನಿ ದೇವಸ್ಥಾನ, ಕಂಬಳ ಇವೆ ಮುಂತಾದ ಉದಾಹರಣೆಗಳಿಂದ ಮೇಲಿನ ಮಾತುಗಳು ಸ್ಪಷ್ಟಗೊಳ್ಳುತ್ತವೆ.

ಈ ರೀತಿಯ ಮಾರಣಾಂತಿಕ ಹಲ್ಲೆಯಿಂದ ನಮ್ಮ ಅತಿ ಪುರಾತನ ನಾಗರೀಕತೆಯ ಉಳಿವೇ ಕಷ್ಟವಾಗಿದೆ. ಇಂದಿನ ಪರಿಸ್ಥಿತಿಯ ವಿಪರ್ಯಾಸವೇನೆಂದರೆ ಅತ್ಯಂತ ಕ್ರೂರ ವಿದೇಶಿ ಆಕ್ರಮಣಗಳ ಹಾಗೂ ವಿದೇಶಿ ಆಳ್ವಿಕೆಗಳ ನಂತರವೂ ನಮ್ಮ ಹಿರಿಯರು ಈ ದೇಶದ ಸಂಸ್ಕೃತಿಯನ್ನು ಮತ್ತು ಪರಂಪರೆಗಳನ್ನು ನಮಗೆ ಸಂರಕ್ಷಿಸಿ ಒದಗಿಸಿಕೊಟ್ಟರು. ಆದರೆ ಸ್ವತಂತ್ರ ಭಾರತದ ಇಂದಿನ ಪ್ರಜೆಗಳಾದ ನಾವು ಇವನ್ನೆಲ್ಲ ನಾಶಪಡಿಸುತ್ತಿದ್ದೇವೆ. ಹಿರಿಯರಿಂದ ಪಡೆದು ಬಂದಿರುವಂತಹ ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಈ ರೀತಿಯಾಗಿ ಹಾನಿಗೊಳಿಸುವ ಅಥವಾ ನಾಶಮಾಡುವ ಅಧಿಕಾರ  ನಮಗಾರಿಗೂ ಇರುವುದಿಲ್ಲ.  ಈ ಬಳುವಳಿಗಳನ್ನು ಇನ್ನೂ ಹೆಚ್ಚಾಗಿ ಪುಷ್ಟಿ ಗೊಳಿಸಿ ನಮ್ಮ ಮುಂದಿನ ಪೀಳಿಗೆಯವರಿಗೆ ಒಪ್ಪಿಸುವ ಕೆಲಸ ನಮ್ಮಿಂದ ಸಾಧ್ಯವಾಗದಿದ್ದರೆ ಕನಿಷ್ಠ ನಮಗೆ ಬಂದು ಸೇರಿದ ರೀತಿಯಲ್ಲಾದರೂ ಅವನ್ನು ಒಪ್ಪಿಸಬೇಕು.  ಇತಿಹಾಸದ ಪುಟಗಳನ್ನು ತಿರುವಿ ಹಾಕಿ ನೋಡಿದರೆ ಮೆಸಪೋಟೋಮಿಯ, ರೋಮ್, ಯವನ,  ಪರ್ಷಿಯನ್, ಇಂಕಾ, ಮಾಯಾ ಮುಂತಾದ ಅನೇಕ ನಾಗರೀಕತೆಗಳು ನಾಶಗೊಂಡಿರುವುದನ್ನು ನಾವು ಕಾಣುತ್ತೇವೆ.  ನಮ್ಮ ಸಮಾಜಕ್ಕೆ ಇಂದು ಓದುವ ಹಾಗೂ ಜ್ಞಾನಾರ್ಜನೆ ಮಾಡುವ ವಿಷಯದಲ್ಲಿ ರೋಗ ಬಡಿದಂತೆ ಆಗಿದೆ. ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಿ ಕೊಳ್ಳದಿದ್ದರೆ ನಮ್ಮ ನಾಗರಿಕತೆಯೂ ಮೇಲೆ ಸೂಚಿಸಿದ ನಾಗರೀಕತೆಗಳಂತೆ ನಾಶವಾಗಿ ಹೋಗುತ್ತದೆ.

ಭಾರತ ದೇಶವೂ ಕೂಡ ‘ಯುನೈಟೆಡ್ ನೇಷನ್ಸ್ ಡಿಕ್ಲರೇಷನ್ ಆನ್ ದಿ ರೈಟ್ಸ್ ಆಫ್ ಇಂಡಿಜೀನುಸ್ ಪೀಪಲ್ – ೨೦೦೭’  ಒಪ್ಪಂದಕ್ಕೆ ಸಹಿ ಹಾಕಿರುತ್ತದೆ. ಈ ಒಪ್ಪಂದದ ಪ್ರಕಾರ ಸಹಿ ಹಾಕಿರುವ ಪ್ರತಿ ದೇಶವು ತಮ್ಮ ತಮ್ಮ ಜಾನಪದ, ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಪಾರಂಪರಿಕ ವ್ಯವಸ್ಥೆಗಳನ್ನು ಕಾನೂನು ಮೂಲಕ, ಒಳ್ಳೆಯ ಆಡಳಿತದ ಮೂಲಕ ಹಾಗೂ  ಸಾರ್ವಜನಿಕ ನೀತಿಗಳ ಮೂಲಕ ಉಳಿಸಿ ಬೆಳೆಸಿ ಪೋಷಿಸಬೇಕು. ವಿದೇಶಿ ನಿಯಮಾವಳಿಗಳಿಗೆ ಬದ್ಧವಾಗಿರುವ ಯಾವುದೇ ವಿಷಯದಲ್ಲಿ ಬೇಕಾಗಿರುವ ಕಾನೂನು ಮತ್ತು ನಿಯಮಗಳನ್ನು ಜಾರಿಗೊಳಿಸುವ ಅಧಿಕಾರವನ್ನು ನಮ್ಮ ಸಂವಿಧಾನ ಆರ್ಟಿಕಲ್ 253 ಇದರ ಅಡಿಯಲ್ಲಿ ಸರಕಾರಕ್ಕೆ ನೀಡಿರುತ್ತದೆ. ನಮ್ಮ ದೇಶದ ಅತಿ ಪ್ರಾಚೀನ ಸನಾತನ ಧರ್ಮವನ್ನು ಉಳಿಸಿ ಬೆಳೆಸುವ ಕರ್ತವ್ಯಕ್ಕೆ ಮೇಲೆ ಹೇಳಿದ ವಿದೇಶಿ ಒಪ್ಪಂದದಿಂದ ಕೂಡ ನಮ್ಮ ಸರಕಾರ ಬದ್ಧವಾಗಿದೆ.

ಸುದೃಢ ನಾಗರೀಕ ಬುನಾದಿಯ ಮೇಲೆ ನಮ್ಮ ದೇಶವನ್ನು ಪ್ರಗತಿಯ ಹಾದಿಯಲ್ಲಿ ನಡೆಸಿಕೊಂಡು ಹೋಗುತ್ತೇವೆ ಎನ್ನುವ ಪ್ರಮಾಣವನ್ನು 2014ನೇಯ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಪಕ್ಷವು ನೀಡಿತ್ತು. ಆ ಪ್ರಣಾಳಿಕೆಯ ಕೆಲವು ವಾಕ್ಯಗಳನ್ನು ಈ ಕೆಳಗೆ ಪ್ರಸ್ತುತ ಪಡಿಸಲಾಗಿದೆ.

ಯಾವುದೇ ದೇಶವು ತನ್ನ ಇತಿಹಾಸ, ತನ್ನ ಮೂಲ ಬೇರು, ತನ್ನ ಶಕ್ತಿ ಹಾಗೂ ತನ್ನ ದುರ್ಬಲತೆಗಳನ್ನು ಅರಿಯದೆ ತನ್ನ ಆಂತರಿಕ ಅಥವಾ ವಿದೇಶಿ ನೀತಿಗಳನ್ನು ರಚಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಬಿಜೆಪಿ ಪಕ್ಷವು ಒಪ್ಪುತ್ತದೆ. ಇಂದಿನ ಚಲನಶೀಲ ಹಾಗೂ ಏಕೀಕೃತ ವಿಶ್ವದಲ್ಲಿ ಯಾವುದೇ ದೇಶಕ್ಕೆ ತನ್ನ ಜನರಿಗೆ ಒಳ್ಳೆಯ ವ್ಯವಸ್ಥೆಯನ್ನು ನೀಡಬೇಕಾದರೆ ತನ್ನ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸಬೇಕು.

ತಿಲಕ್, ಗಾಂಧಿ, ಅರಬಿಂದೋ, ಪಟೇಲ್, ಬೋಸ್ ಮುಂತಾದವರಿಂದ ಪ್ರೇರಿತವಾಗಿದ್ದ ನಮ್ಮ ಸ್ವಾತಂತ್ರ್ಯ ಹೋರಾಟ ಸಂಗ್ರಾಮ ದೇಶದ ನಾಗರೀಕ ಜಾಗೃತಾವಸ್ಥೆಯನ್ನು ಚೆನ್ನಾಗಿ ಅರಿತುಕೊಂಡಿತ್ತು. ಭಾರತೀಯ ವ್ಯವಸ್ಥೆಗಳನ್ನು ಹಾಗೂ ನೀತಿಗಳನ್ನು ಯೋಜನೆಯಲ್ಲಿ ಇಟ್ಟುಕೊಂಡೇ ಸ್ವಾತಂತ್ರ್ಯ ಹೋರಾಟಗಾರರು ಚಳುವಳಿಯನ್ನು ನಡೆಸಿದ್ದರು. ರಾಜನೈತಿಕ ಹಾಗೂ ಆರ್ಥಿಕ ಸಂಸ್ಥೆಗಳನ್ನು ಪುನರ್ ನಿರ್ಮಾಣ ಮಾಡುವಾಗ ನಮ್ಮ ಪುರಾತನ ಸಾಂಸ್ಕೃತಿಕ ಹಾಗೂ ಜಾನಪದ ಪರಂಪರೆಗಳನ್ನು ಜೊತೆಗೂಡಿಸಿಕೊಂಡು ಹೋಗಬೇಕು ಅದರಿಂದಾಗಿ ಒಂದು ದೇಶ ಒಂದು ಜನತೆ ಒಂದು ರಾಷ್ಟ್ರ ನಿರ್ಮಾಣವಾಗಬೇಕು ಎಂಬ ಧ್ಯೇಯವನ್ನು ನಾಯಕರು ಹೊಂದಿದ್ದರು.

ಸ್ವಾತಂತ್ರ್ಯದ ನಂತರ ಅಧಿಕಾರಕ್ಕೆ ಬಂದಂತಹ ನಾಯಕರು ಸ್ವಾತಂತ್ರ್ಯ ಚಳುವಳಿಯಲ್ಲಿ ಹುಟ್ಟಿಕೊಂಡಂತಹ ಆಧ್ಯಾತ್ಮಿಕ ದೂರದೃಷ್ಟಿಯನ್ನು ಕಳೆದುಕೊಂಡರು……. ನಾಯಕರುಗಳಿಗೆ ಭಾರತದ ಒಳಗಿನ ಚೇತನವನ್ನು ಅರ್ಥಮಾಡಿಕೊಳ್ಳಲು ಆಗದೆ ಸ್ವತಂತ್ರ ಭಾರತದಲ್ಲಿ ಚೈತನ್ಯವನ್ನು ಮತ್ತೆ ಹುಟ್ಟುವಂತೆ ಮಾಡಲು ಅಸಾಧ್ಯವಾಯಿತು.

ಸ್ವಾತಂತ್ರ್ಯ ದೊರಕಿ ಏಳು ದಶಕಗಳು ಕಳೆದುಹೋದರೂ ನಮ್ಮ ದೇಶಕ್ಕೆ ತನ್ನ ಒಳಗಿನ ಚೈತನ್ಯ, ಸಮಯ ಪ್ರಜ್ಞೆ ಹಾಗೂ ಕೆಲಸ ಮಾಡುವ ಉತ್ಸಾಹ ಮರಳಿ ಬಂದಿಲ್ಲ. ಇದರ ಪರಿಣಾಮವಾಗಿ ವಿಶ್ವದ ಅತಿ ಹಳೆಯ ನಾಗರೀಕತೆ ಹಾಗೂ ಯುವ ಗಣರಾಜ್ಯವಾಗಿದ್ದರೂ ಬಹು ರೀತಿಯ ತೊಂದರೆಗಳಿಂದ ನಾವು ಆವರಣಕ್ಕೊಳಗಾಗಿದ್ದೇವೆ……..ಇದರ ಕಾರಣಗಳನ್ನು ಸರಿಯಾಗಿ ಕಂಡುಹಿಡಿಯಲಾಗದೆ ಮತ್ತು ಇದನ್ನು ಸರಿ ಮಾಡುವ ಮಾರ್ಗವನ್ನು ತಿಳಿಯದೆ ದುರಂತವನ್ನು ಇನ್ನೂ ಹೆಚ್ಚು ಮಾಡಿಕೊಳ್ಳುತ್ತಿದ್ದೇವೆ.

ಆದ್ದರಿಂದ ತನ್ನ 2014 ನೆಯ ಚುನಾವಣಾ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿರುವಂತೆ ಮತ್ತು ‘ಯುನೈಟೆಡ್ ನೇಷನ್ಸ್ ಡಿಕ್ಲರೇಷನ್ ಆನ್ ದಿ ರೈಟ್ಸ್ ಆಫ್ ಇಂಡಿಜೀನುಸ್ ಪೀಪಲ್ – ೨೦೦೭’  ಒಪ್ಪಂದಕ್ಕೆ ಕಟ್ಟುಬದ್ಧಾಗಿರುವುದರಿಂದ ಕೇಂದ್ರ ಸರ್ಕಾರವು ಈ ಕೂಡಲೇ ಮುಂಬರುವ ಸಂಸತ್ ಅಧಿವೇಶನದಲ್ಲೇ “ಧರ್ಮ ಸ್ವಾತಂತ್ರ್ಯ (ಸಾಂಪ್ರದಾಯಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಪದ್ದತಿಗಳ ಸಂರಕ್ಷಣೆ ಮತ್ತು ಸಾಂಸ್ಥಿಕ ಧರ್ಮ ಪರಿವರ್ತನಾ ನಿಷೇಧ) ಕಾಯ್ದೆ” ಇದನ್ನು ಜಾರಿಗೆ ತರಬೇಕು.

ಇದಕ್ಕೆ ಪರ್ಯಾಯವಾಗಿ ಸಂಸತ್ತಿನಲ್ಲಿ ವಿಳಂಬವಾಗುವುದಾದರೆ ಸುಗ್ರೀವಾಜ್ಞೆಯೊಂದನ್ನು ಕೂಡಲೇ ಜಾರಿಗೊಳಿಸಬೇಕು.

Leave a Reply