ವಿಶ್ವದ ಎಲ್ಲಾ ಪ್ರಮುಖ ಅಭಿವೃದ್ಧ ದೇಶಗಳು ತಮ್ಮ ತಮ್ಮ ಸ್ವಂತ ಭಾಷೆಗಳನ್ನೇ ಉಪಯೋಗಿಸಿ ಉಚ್ಚ ಹಾಗೂ ತಾಂತ್ರಿಕ ಶಿಕ್ಷಣವನ್ನು ನೀಡುತ್ತವೆ.ವಿಷಾದದ ಸಂಗತಿ ಏನೆಂದರೆ ಸ್ವಾತಂತ್ರ್ಯ ದೊರಕಿ ಎಪ್ಪತ್ತು ವರುಷಗಳಾದರೂ ಭಾರತ ದೇಶದ ಮೇಲೆ ಇಂದಿಗೂ ಆಂಗ್ಲಭಾಷೆಯ ಸಂಪೂರ್ಣ ನಿಯಂತ್ರಣವಿದೆ. 1947ರಲ್ಲಿ ನಮ್ಮ ಸಂವಿಧಾನ ಕರ್ತೃಗಳಲ್ಲಿ ಆಂಗ್ಲ ಭಾಷೆ ತಾತ್ಕಾಲಿಕವಾಗಿ ಮಾತ್ರ ಪ್ರಾಮುಖ್ಯತೆ ಪಡೆಯಬೇಕು ಎಂಬ ವಿಚಾರವಿತ್ತು. ಆದರೆ ಇಂದಿನ ಪರಿಸ್ಥಿತಿ ಹೇಗಿದೆ ಎಂದರೆ ಭಾರತೀಯ ಪ್ರಜೆಯೊಬ್ಬ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಾಗಲೀ ಆಗಲಿ ಅಥವಾ ರಾಜ್ಯಗಳ ಉಚ್ಚ ನ್ಯಾಯಾಲಯಗಳಲ್ಲೇ ಆಗಲಿ ತನ್ನ ಸ್ವಂತ ಮಾತೃಭಾಷೆಯಲ್ಲಿ ಕಾರ್ಯ ನಡೆಸಲು ಅವಕಾಶವಿಲ್ಲ. ನಮಗೆ ನಮ್ಮ ಮಾತೃಭಾಷೆಗಳಲ್ಲಿ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಪಡೆಯುವ ಅವಕಾಶವಿಲ್ಲ. ಯಾವುದೇ ಇಲಾಖೆ ಅಥವಾ ಸಂಸ್ಥೆಯಾಗಲಿ ಆಂಗ್ಲಭಾಷೆ ಒಂದು ಭಾಧಕವಾಗಿ ಮಾರ್ಪಟ್ಟಿದೆ.

ಈ ಪರಿಸ್ಥಿತಿಯನ್ನು ನಮ್ಮ ಪ್ರಾಥಮಿಕ ಶಿಕ್ಷಣದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಆಂಗ್ಲ ಭಾಷೆಯಲ್ಲಿ ವಿಧಿಸಿ ಸರಿಗೊಳಿಸಲಾಗುವುದಿಲ್ಲ .ಯುನೆಸ್ಕೋ ಸಂಸ್ಥೆಯ ಮಾರ್ಗದರ್ಶನದಲ್ಲಿ ಚಿಕ್ಕ ಪ್ರಾಯದ ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಮಾತ್ರ ಚೆನ್ನಾಗಿ ಕಲಿಯುತ್ತಾರೆ ಎಂಬ ವಿಷಯವನ್ನು ತಿಳಿಸಿದ್ದಾರೆ. ಇದೇ ವಿಷಯದ ಬಗ್ಗೆ ಅನೇಕ ವೈಜ್ಞಾನಿಕ ಸಂಶೋಧನೆಗಳು ಕೂಡ ನಡೆಸಲಾಗಿದ್ದು ಮಾತೃಭಾಷೆ ಕಲಿಕೆಗೆ ಅತ್ಯುತ್ತಮ ಎಂಬುದು ಸಾಬೀತಾಗಿದೆ. ಆಂಗ್ಲಭಾಷೆಯನ್ನೇ ಪದೇ ಪದೇ ಮುಂದುವರಿಸುವುದರಿಂದ ನಮ್ಮ ಮಕ್ಕಳ ಆಲೋಚನಾ ಶಕ್ತಿಗೆ ಹ್ರಾಸವಾಗುತ್ತಿದೆ. ಇದರಿಂದಾಗಿ ಇಂದಿನ ತಾಂತ್ರಿಕ ಹಾಗೂ ವೈಜ್ಞಾನಿಕ ಜಗತ್ತಿನಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಉತ್ತರಿಸುವುದರಲ್ಲಿ ಹಾಗೂ ದೊರೆಯುತ್ತಿರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳುವುದರಲ್ಲಿ ನಮ್ಮ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ. ನಮ್ಮ ಅಪಾರ ಜನಸಂಖ್ಯೆ ನಮಗೆ ಶಕ್ತಿಯಾಗುವ ಬದಲಿಗೆ ಶಾಪವಾಗುವ ಸಾಧ್ಯತೆ ಇದೆ. ಹಿಂದಿನ ಕಾಲದಲ್ಲಿ ಅನೇಕ ಆವಿಷ್ಕಾರಗಳಿಗೆ ಹೆಸರುವಾಸಿಯಾಗಿದ್ದ ನಮ್ಮ ರಾಷ್ಟ್ರ ಆಂಗ್ಲ ಮಾಧ್ಯಮದ ಶಿಕ್ಷಣದಿಂದಾಗಿ ಪಾಶ್ಚಾತ್ಯ ನಾಗರೀಕತೆಯನ್ನು ನಕಲು ಮಾಡುವ ದೇಶ ಎನಿಸಿಕೊಂಡಿದೆ. ಜಾರಿ ಹೋಗುತ್ತಿರುವ ತಳಹದಿಯನ್ನು ಸರಿಮಾಡಲು, ನಮ್ಮ ಸ್ವಾಭಿಮಾನವನ್ನು ಪುನರ್ ಪ್ರತಿಷ್ಠೆ ಮಾಡಲು, ಮತ್ತು ಭಾರತ ದೇಶವನ್ನು ಅಭಿವೃದ್ಧಿ ರಾಷ್ಟ್ರವನ್ನಾಗಿ ಹಾಗೂ ಆವಿಷ್ಕಾರಪರ ಸಮಾಜವನ್ನಾಗಿ ಮಾಡಲು ನಮ್ಮ ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡುವುದು ಅತ್ಯವಶ್ಯಕ.

ಬಿಜೆಪಿ ಪಕ್ಷವು ತನ್ನ 2014ನೆಯ ಚುನಾವಣಾ ಪ್ರಣಾಳಿಕೆಯಲ್ಲಿ ಭಾರತೀಯ ಭಾಷೆಗಳನ್ನು ಪೋಷಿಸಿ ಬೆಳೆಸುವುದಾಗಿ ಆಶ್ವಾಸನೆ ನೀಡಿತ್ತು ಎಂಬುದನ್ನು ಗಮನಿಸಿದಾಗ ಕೊಂಚ ಮಟ್ಟಿಗೆ ಸಮಾಧಾನವಾಗುತ್ತದೆ. ಪ್ರಣಾಳಿಕೆಯಲ್ಲಿ ಪಕ್ಷವು ಈ ರೀತಿಯಾಗಿ ಹೇಳಿತ್ತು:

“ಭಾಷೆಗಳು: ಭಾರತೀಯ ಭಾಷೆಗಳು ನಮ್ಮ ಸಮೃದ್ಧ ಸಾಹಿತ್ಯ, ಇತಿಹಾಸ, ಸಂಸ್ಕೃತಿ, ಹಾಗೂ ವೈಜ್ಞಾನಿಕ ಸಾಧನೆಗಳ ಭಂಡಾರವಾಗಿವೆ. ನಮ್ಮ ಪರಂಪರೆಗಳನ್ನು ತಿಳಿದುಕೊಳ್ಳುವ ದಿಟ್ಟಿನಲ್ಲಿ ಸ್ಥಳೀಯ ಭಾಷೆಗಳು ಮಹತ್ವದ್ದಾಗಿದೆ. ಬಿಜೆಪಿ ಪಕ್ಷವು ಭಾರತೀಯ ಭಾಷೆಗಳನ್ನು ಪೋಷಿಸಿ ಅವುಗಳ ಅಭಿವೃದ್ಧಿಗಾಗಿ ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತದೆ. ಇದರಿಂದಾಗಿ ಜ್ಞಾನ ಸಮಾಜ ನಿರ್ಮಾಣದ ಪಥದಲ್ಲಿ ಸಾಗುವಂತಾಗುತ್ತದೆ”

ಈ ಮೇಲಿನ ವಿಶ್ವಾಸವನ್ನು ಸತ್ಯವಾಗಿ ಪರಿವರ್ತಿಸಲು ನಮ್ಮ ಮಕ್ಕಳಿಗೆ ಹಾಗೂ ಯುವಕರಿಗೆ ವೃತ್ತಿಪರ ಹಾಗೂ ಇತರೆ ಉಚ್ಚ ಶಿಕ್ಷಣದಲ್ಲಿ ಭಾರತೀಯ ಭಾಷೆಗಳನ್ನು ಉಪಯೋಗಿಸುವ ಅವಕಾಶ ಕಾನೂನು ಮುಖಾಂತರ ಒದಗಿಸಿಕೊಡಬೇಕು.  ಭಾಷೆಗಳನ್ನು ಪೋಷಿಸುವ ಉದ್ದೇಶದಿಂದ ಸಾರ್ವಜನಿಕ ಉದ್ಯಮದಲ್ಲಿ, ವಿದ್ಯಾರ್ಥಿ ವೇತನಗಳಲ್ಲಿ, ಶೈಕ್ಷಣಿಕ ಸಾಲಗಳಲ್ಲಿ ಇನ್ನೂ ಇತರೆ ವಿಷಯಗಳಲ್ಲಿ ರಿಯಾಯಿತಿಗಳು ಮತ್ತು ಅನುಕೂಲಗಳನ್ನು ಮಾಡಿಕೊಡಬೇಕು. ಆಡಳಿತದ ಎಲ್ಲಾ ವಿಭಾಗಗಳಲ್ಲಿ, ಎಲ್ಲಾ ನ್ಯಾಯಾಲಯಗಳಲ್ಲಿ, ಸಾರ್ವಜನಿಕ ಪರೀಕ್ಷೆಗಳಲ್ಲಿ ಮತ್ತು ಶಿಕ್ಷಣದಲ್ಲಿ ಭಾರತೀಯ ಭಾಷೆಗಳಿಗೆ ಸಮಾನ ಅವಕಾಶವಿರುತ್ತದೆ ಎಂಬ ಧ್ಯೇಯವನ್ನು ಸ್ಥಾಪಿಸಬೇಕು. ಭಾಷಾ ಸಂಬಂಧಿತ ತಂತ್ರಜ್ಞಾನ ಇಂದಿನ ದಿನಗಳಲ್ಲಿ ತುಂಬಾ ಮುಂದುವರೆದಿದೆ. ಇದರಿಂದಾಗಿ ಎಲ್ಲಾ ಭಾಷೆಗಳಿಗೆ ಸಹಾಯ ಮತ್ತು ಪ್ರೋತ್ಸಾಹ ನೀಡುವುದು ಹಿಂದಿನಷ್ಟು ಕಷ್ಟವಲ್ಲ.

ಆದ್ದರಿಂದ ಕೇಂದ್ರ ಸರಕಾರಕ್ಕೆ ಈ ಕೆಳಗಿನ ಮನವಿಗಳನ್ನು ಮಾಡುತ್ತೇವೆ:

(i) ವೃತ್ತಿಪರ ಶಿಕ್ಷಣ, ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ, ಕಾನೂನು ಶಿಕ್ಷಣ, MBA, CA ಮತ್ತು ಇನ್ನಿತರೇ ಉನ್ನತ ಶಿಕ್ಷಣಗಳಲ್ಲಿ ಕೂಡ ಭಾರತೀಯ ಭಾಷೆಗಳನ್ನು ಉಪಯೋಗಿಸುವ ನಿಟ್ಟಿನಲ್ಲಿ ಸಾರ್ವಜನಿಕ ನೀತಿಯನ್ನು ಜಾರಿಗೊಳಿಸಬೇಕು.  ಭಾರತೀಯ ಭಾಷೆಗಳ ಸಂರಕ್ಷಣೆ ಹಾಗೂ ಪೋಷಣೆಗೆ ಬೇಕಾದ ಹಣ ಸಹಾಯವನ್ನು ಮಾಡಬೇಕು.

(ii) ಜನರ ಜೀವನೋಪಾಯ ಹಾಗೂ ಆರ್ಥಿಕ ಬೆಳವಣಿಗೆಗೆ ಸಹಾಯವಾಗುವ ರೀತಿಯಲ್ಲಿ ಭಾರತೀಯ ಭಾಷೆಗಳಿಗೆ ಪ್ರೋತ್ಸಾಹ ನೀಡುವಂತಹ ನೀತಿಗಳನ್ನು ರೂಪಿಸಬೇಕು. ಉದಾಹರಣೆಗೆ ಚೀನಾ ದೇಶದಲ್ಲಿ ಎಲ್ಲಾ ಟೆಂಡರ್ಗಳು ಮತ್ತು ಒಪ್ಪಂದಗಳು ಚೀನೀ ಭಾಷೆಯಲ್ಲೇ ಇರಬೇಕೆಂಬ ನಿಯಮವಿದೆ. ಇದರಿಂದಾಗಿ ಚೀನೀ ಭಾಷೆಯನ್ನು ಕಲಿಯುವ ಪ್ರಯತ್ನಗಳು  ವಿಶ್ವದಾದ್ಯಂತ ಹೆಚ್ಚಿವೆ.

(iii)  ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಇದೇ ರೀತಿಯ ನೀತಿ-ನಿಯಮಗಳನ್ನು ಸ್ಥಾಪಿಸಬೇಕೆಂಬ ಸೂಚನೆಯನ್ನು ನೀಡಬೇಕು.

(iv)  ಸರ್ವೋಚ್ಚ ನ್ಯಾಯಾಲಯ ಹಾಗೂ ರಾಜ್ಯ ನ್ಯಾಯಾಲಯಗಳಿಗೆ ಭಾರತೀಯ ಭಾಷೆಗಳನ್ನು ಉಪಯೋಗಿಸತಕ್ಕದ್ದು ಎಂಬ ಮನವಿಯನ್ನು ಕೇಂದ್ರ ಸರಕಾರ ಮಾಡಬೇಕು.

One Thought on “ಭಾರತದ ವಿವಿಧ ಭಾಷೆಗಳಿಗೆ ಸಮಾನ ರೀತಿಯ ಅವಕಾಶಗಳನ್ನು ಕಲ್ಪಿಸಿ ಕೊಡಬೇಕು”

Leave a Reply