ಭಾರತ ಒಂದು ಸ್ವಾವಲಂಬಿ ಹಾಗೂ ಸ್ವಾಭಿಮಾನಯುಕ್ತ ದೇಶ. ನಮಗೆ ಯಾವುದೇ ವಿದೇಶಿಯರ ದಯೆಯ ಹಣದ ಅಗತ್ಯವಿಲ್ಲ. ಅಮೇರಿಕಾದ ಒಂದು ಪ್ರಸಿದ್ಧ ಗಾದೆ ಹೀಗಿದೆ “ಯಾರಿಗೇ ಆಗಲಿ ಉಚಿತ ಊಟ ಸಿಗುವುದಿಲ್ಲ”. ಹೊರದೇಶದಿಂದ ನಮ್ಮ ರಾಷ್ಟ್ರಕ್ಕೆ ಬರುವ “ಕೊಡುಗೆಯ” ಹಣದಿಂದ ಅನೇಕ ದೇಶ ವಿರೋಧಿ ಕಾರ್ಯಗಳಿಗೆ ಸಹಾಯ ಸಿಗುತ್ತಿದೆ. ನಮ್ಮ ಸಮಾಜದ “ಪರಿವರ್ತನೆ”ಯ ಕಾರ್ಯ, ದೇಶದ ಡೆಮೋಗ್ರಫಿ ಬದಲಿಸುವ ಕೆಲಸ, ದೇಶ-ವಿಭಜನಾತ್ಮಕ ಕಾರ್ಯ, ಸಾಮಾಜಿಕ ಅಶಾಂತಿ ಹೆಚ್ಚಿಸುವುದು, ನಮ್ಮ ಆರ್ಥಿಕ ಹಾಗೂ ತಾಂತ್ರಿಕ ಪ್ರಗತಿಯಲ್ಲಿ ಅಡಚಣೆ ತರುವುದು, ನಮ್ಮ ಮನಸ್ಸು ಹಾಗೂ ಬುದ್ಧಿಗಳನ್ನು ಪಾಶ್ಚಾತ್ಯರ ನೀತಿಯ ಚೌಕಟ್ಟಿನಲ್ಲಿ ಸೆರೆಹಿಡಿಯುವುದು, ಇವೇ ಮುಂತಾದ ಕಾರ್ಯಗಳಲ್ಲಿ ಈ ವಿದೇಶಿ ಹಣದ ಉಪಯೋಗವಾಗುತ್ತಿದೆ.

ದೇಶದ ಲಾಭ-ರಹಿತ (non-profit) ಹಾಗೂ ವಾಣಿಜ್ಯೇತರ ಸಂಸ್ಥೆಗಳಿಗೆ ಬರುವ ಅಪಾರ ಸಂಖ್ಯೆಯ ದಾನ ದೇಣಿಗೆಗಳು ವಿದೇಶಿ ಸರಕಾರಗಳ ಜೊತೆ ಹೊಂದಾಣಿಕೆ ಹೊಂದಿರುವ ವ್ಯಕ್ತಿಗಳಿಂದ ಮತ್ತು ಸಂಸ್ಥೆಗಳಿಂದ ಆಗುತ್ತಿವೆ. ಮಾನವೀಯ ಮೌಲ್ಯಗಳ ಸಂರಕ್ಷಣೆ ಮತ್ತು ಸಾಮಾಜಿಕ ಸುಧಾರಣೆ ಎಂಬ ಕಾರಣಗಳ ಛಾಯೆಯಲ್ಲಿ ಈ ಹಣದಿಂದ ನಮ್ಮ ದೇಶದ ಸರಕಾರಗಳ ಮೇಲೆ, ರಾಜಕಾರಣದ ಮೇಲೆ ಹಾಗೂ ನ್ಯಾಯಶಾಸನದ ಮೇಲೆ ಅಪಾರವಾದ ಪ್ರಭಾವ ಬೀರಲಾಗುತ್ತಿದೆ. ಆದರೆ ಈ ಹಣದ ನಿಜವಾದ ಉದ್ದೇಶ ನಮ್ಮ ದೇಶದ ಪ್ರಜಾಪ್ರಭುತ್ವದ ಬುನಾದಿಯನ್ನೇ ಅಡಿಮೇಲು ಮಾಡುವುದು. ಇಂದಿನ ವಿಚಿತ್ರ ಸತ್ಯಗಳಲ್ಲಿ ಒಂದು ಈ ನಮ್ಮ “civil society” ಪ್ರತಿನಿಧಿಗಳು. ಈ ಹೆಸರು-ಮಾತ್ರದ ಪ್ರತಿನಿಧಿಗಳಿಗೆ ನಮ್ಮ “society”ಇಂದ ಹಣ ಬರದೆ ವಿದೇಶಿ ರಾಷ್ಟ್ರಗಳಿಂದ ಮತ್ತು ಸಂಸ್ಥೆಗಳಿಂದ ಬರುತ್ತಿವೆ! ಈ ರೀತಿಯ ಹಣ ಪಡೆದ ಈ ಪ್ರತಿನಿಧಿಗಳು ನಮ್ಮ ದೇಶವನ್ನು ಅತಂತ್ರ ಸ್ಥಿತಿಗೆ ತರುವ ಕಾರ್ಯಗಳನ್ನು ಮತ್ತು ವಿದೇಶಿ ತಾಕತ್ತುಗಳಿಗೆ ಬೇಕಾಗಿರುವ ಕೋಮು ಗಲಭೆ ಸಂದರ್ಭಗಳನ್ನು ಸೃಷ್ಟಿಮಾಡುವುದರಲ್ಲಿ ತೊಡಗಿವೆ ಎನ್ನುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

ಕೇಂದ್ರದಲ್ಲಿ ಯಾವುದೇ ಪಕ್ಷದ ಸರ್ಕಾರವಿರಲೀ ಅಥವಾ ಹಣದ ಒಳಹರಿವು ಮತ್ತು ಉಪಯೋಗವನ್ನು ನಿಯಂತ್ರಿಸುವುದರಲ್ಲಿ ಸರ್ಕಾರದ ಎಷ್ಟೇ ಪ್ರಯತ್ನವಿದ್ದರೂ, ವರ್ಷದಿಂದ ವರ್ಷಕ್ಕೆ ಈ ಹಣದ ಪ್ರವಾಹ ಹೆಚ್ಚುತ್ತಲೇ ಇದೆ. ಹಾಗೆಯೇ ನಮ್ಮ ಆಂತರಿಕ ವಿಚಾರಗಳಲ್ಲಿ ಅನಗತ್ಯ ವಿದೇಶಿ ಹಸ್ತಕ್ಷೇಪ ಹೆಚ್ಚುತ್ತಲೇ ಇದೆ ಎಂಬುದು ಈ ಕೆಳಗಿನ ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತದೆ.

ಕ್ರಮ ಸಂಖ್ಯೆ ವರ್ಷ FCRA ಮುಖಾಂತರ ಒಳಬಂದಿರುವ ಹಣ ಉಲ್ಲೇಖ
1 2010-11 Rs. 10,865/- ಕೋಟಿ ರೂ ಎಂ.ಎಚ್.ಎ  L.No. II/21011/58(974)/2017-FCRA-MU ದಿನಾಂಕ 07-11-2017 ರಂದು RTI ಗೆ ಕೊಟ್ಟ ಉತ್ತರ.
2 2011-12 Rs. 11,935/- ಕೋಟಿ ರೂ
3 2012-13 Rs. 12,614/- ಕೋಟಿ ರೂ
4 2013-14 Rs. 14,853/- ಕೋಟಿ ರೂ
5 2014-15 Rs. 15,297/- ಕೋಟಿ ರೂ
6 2015-16 Rs. 17,765/- ಕೋಟಿ ರೂ
7 2016-17 Rs. 18,065/- ಕೋಟಿ ರೂ PIB ಮಾಧ್ಯಮ ಹೇಳಿಕೆ 1 June 2018 ಎಂ.ಎಚ್.ಎ ಇವರಿಂದ

ನೈಸರ್ಗಿಕ ದುರಂತಗಳ ಸಮಯದಲ್ಲೂ ದೇಶದ ಸ್ವಾಭಿಮಾನದ ಪ್ರಶ್ನೆ ಎಂದು ಯಾವುದೇ ವಿದೇಶಿ ಕೊಡುಗೆಗಳನ್ನು ನಿರಾಕರಿಸುತ್ತಿರುವ ನಾವು ದೇಶವನ್ನೇ ಧ್ವಂಸಗೊಳಿಸುವ ಉದ್ದೇಶದಿಂದ ಬರುತ್ತಿರುವ ಈ FCRA ಹಣವನ್ನು ಖಂಡಿತಾ ಬೇಡ ಎನ್ನಬೇಕು. ನಮ್ಮ ಆಂತರಿಕ ಪರಿಹಾರ, ಪುನರ್ವಸತಿ ಹಾಗೂ ಧಾರ್ಮಿಕ ಅಥವಾ ದತ್ತಿ ಕೆಲಸಗಳಿಗೆ ಬೇಕಾದ ಹಣವನ್ನು ಒಟ್ಟು ಗೂಡಿಸುವ ತಾಕತ್ತು ನಮ್ಮ ದೇಶದಲ್ಲೇ ಇದೆ. ಸಮಾಜ ಸುಧಾರಣೆಗೆ ಬೇಕಾದ ಲಾಬಿ ಕೆಲಸಕ್ಕೂ ಒಳಗಿನಿಂದಲೇ ಹಣ ಒದಗಿಸುವ ಶಕ್ತಿ ನಮ್ಮಲ್ಲಿದೆ.

ಆದ್ದರಿಂದ ನಮ್ಮ NGO ಮತ್ತು ಇತರ ಗುಂಪುಗಳಿಗೆ ವಿದೇಶದಿಂದ ಬರುತ್ತಿರುವ ಹಣವನ್ನು ಸಂಪೂರ್ಣವಾಗಿ ನಿಷೇಧಿಸಿಬೇಕಾದ ಕಾಲ ಈಗ ಬಂದಿದೆ. ಸಂಪೂರ್ಣ ನಿಷೇಧವಲ್ಲದೆ ಇನ್ನಾವುದೇ ಅರೆ-ಮನಸಿನ ಕಾನೂನು ತಂದರೆ ಅವನ್ನು ಬದಿಗೊತ್ತಿ ತಮ್ಮ ಕೆಲಸಕ್ಕೆ ಬೇಕಾದ ಅವಕಾಶವನ್ನು ತಯಾರು ಮಾಡುವ ತಾಕತ್ತು ಈ ಸಂಸ್ಥೆಗಳಿಗಿದೆ.

ಹೊರನಾಡಲ್ಲಿರುವ ಭಾರತೀಯರ ಅಪಾರ ಕೊಡುಗೆಗಳನ್ನು ಭಾರತ ಸದಾ ಸ್ಮರಿಸಿದೆ. ಅವರಿಗೆ ನಮ್ಮ ನಾಡಿನ ಮೇಲೆ ಹೆಚ್ಚಿನ ಪ್ರೀತಿ ಮತ್ತು ನಂಟು ಇನ್ನೂ ಇದೆ ಎಂಬ ವಿಷಯವನ್ನು ಕೂಡ ನಮ್ಮ ಸಮಾಜ ಒಪ್ಪಿದೆ. ಅದ್ದರಿಂದ ತಮ್ಮ ವೈಯಕ್ತಿಕ ವತಿಯಿಂದ ಈ ಹೊರನಾಡ-ಭಾರತೀಯರು (OCI) ತರುವ ಹಣವನ್ನು ಮಾತ್ರ ಅನುಮೋದಿಸಬೇಕು. ಈ ಹಣವನ್ನು ಕೂಡ ಭಾರತದ ಪುರಾತನ ಪರಂಪರೆ ಮತ್ತು ಸಂಸ್ಕೃತಿಗೆ ಸಂಬಂಧ ಪಟ್ಟ ಕಾರ್ಯ ಮತ್ತು ಇವುಗಳ ರಕ್ಷಣೆ ಹಾಗೂ ಪ್ರಸಾರಕ್ಕೆ ಸಂಬಂಧಿತ ಕೆಲಸಕ್ಕೆ ಮಾತ್ರ ವಿನಿಯೋಗ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು.

ಇವಲ್ಲದೇ ಇನ್ನಾವುದೇ ಉದ್ದೇಶಕ್ಕೆ ಹಣ ಕಳುಹಿಸುವ ಬಯಕೆಯನ್ನು ಹೊರನಾಡ-ಭಾರತೀಯರಾಗಲೀ ಅಥವಾ ವಿದೇಶಿ ಪ್ರಜೆಗಳಾಗಲೀ ವ್ಯಕ್ತಪಡಿಸಿದರೆ ಆ ದಾನ-ದತ್ತಿಯನ್ನು ಪ್ರಧಾನ ಮಂತ್ರಿಗಳ ಸಹಾಯ ನಿಧಿಗೆ ಮಾತ್ರ ಕೊಡುವ ಅವಕಾಶವನ್ನು ಕಲ್ಪಿಸಿಕೊಡಬೇಕು.

ಆದ್ದರಿಂದ ಈ ಮುಂಬರುವ ಲೋಕ ಸಭೆಯ ಅಧಿವೇಶನದಲ್ಲೇ “ವಿದೇಶಿ ಕೊಡುಗೆ (ನಿಷೇಧ) ಕಾಯ್ದೆ” ಇದನ್ನು ಜಾರಿಗೆ ತಂದು “ವಿದೇಶಿ ಕೊಡುಗೆ (ನಿಬಂಧನೆ) ಕಾಯ್ದೆ, ೨೦೧೦” ಇದನ್ನು ವಾಪಸ್ ಪಡೆದು, OCI ಹೊರದೇಶ-ಭಾರತೀಯರನ್ನು ಹೊರತು ಇನ್ನಾರರಿಂದಲೂ ವಿದೇಶಿ ಹಣದ ಕೊಡುಗೆ ಬಾರದಿರುವಂತೆ ಮಾಡಬೇಕು ಎಂದು ಮಾನ್ಯ ಪ್ರಧಾನ ಮಂತ್ರಿಗಳಲ್ಲಿ ನಾವು ಸವಿನಯ ಪ್ರಾರ್ಥನೆ ಸಲ್ಲಿಸುತ್ತೇವೆ.

ಇದರ ಬದಲಿಗೆ ತಕ್ಷಣದಲ್ಲೇ ಕಾನೂನು ರೀತ್ಯ ಆಜ್ಞೆ (ordinance) ಮೂಲಕ ಕೂಡ ಇದೇ ನಿಯಮಗಳನ್ನು ಜಾರಿಗೆ ತರಬಹುದು ಎಂಬ ವಿಷಯವನ್ನು ಪ್ರಸ್ತಾಪಿಸುತ್ತೇವೆ.

Leave a Reply