ನಮ್ಮ ದೇಶದ ಉದ್ದಗಲಕ್ಕೂ ಸಾವಿರಾರು ಹಿಂದೂ ದೇವಸ್ಥಾನಗಳು ಪಾಳುಬಿದ್ದಿವೆ ಅಥವಾ ನಾಶವಾಗಿವೆ. ಇದಲ್ಲದೇ ಇನ್ನೂ ಹಲವಾರು ದೇವಸ್ಥಾನಗಳು ನಿರ್ವಹಣೆ ಇಲ್ಲದೆ ಕೆಟ್ಟ ಪರಿಸ್ಥಿತಿಯಲ್ಲಿ ಸಿಲುಕಿವೆ. ಸ್ವಾತಂತ್ರ್ಯ ದೊರಕಿ 70 ವರುಷಗಳಾದರೂ ಹಲವು ದೇವಸ್ಥಾನಗಳು ಉಪಯೋಗವಿಲ್ಲದೇ ಅಥವಾ ಹಾಳಾಗಿ ಮೂಲೆಗುಂಪಾಗಿವೆ. ಆದ್ದರಿಂದ ಎಲ್ಲಾ ದೇವಸ್ಥಾನಗಳ ಹಾಗೂ ಪವಿತ್ರ ಸ್ಥಳಗಳ ಸುವ್ಯವಸ್ಥೆಯ ಕೆಲಸ ತಕ್ಷಣದಲ್ಲೇ ಆಗತಕ್ಕದ್ದು. ASI ಅಥವಾ ರಾಜ್ಯ ಪುರಾತತ್ವಶಾಸ್ತ್ರ ಇಲಾಖೆಯ ಕೈಯಲ್ಲಿ ಇರುವ ದೇವಸ್ಥಾನಗಳೇ ಆಗಲಿ ಅಥವಾ ಖಾಸಗಿ ಆಡಳಿತಕ್ಕೆ ಒಳಪಟ್ಟಿರುವ ದೇವಸ್ಥಾನಗಳೇ ಆಗಲಿ ಎರಡನ್ನು ದುಸ್ಥಿತಿಯಿಂದ ಹೊರತರುವ ಮತ್ತು ಅವುಗಳ ಮೂಲ ರೂಪಕ್ಕೆ ಅನುಗುಣವಾಗಿ ತಯಾರುಮಾಡುವ ಕೆಲಸವನ್ನು ಕೈಗೊಳ್ಳಬೇಕು. ಈ  ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಮತ್ತೆ ಪ್ರಾರಂಭವಾಗುವಂತೆ ಆಗಬೇಕು.

ಇದಲ್ಲದೆ ವೇದ ಪಾಠಶಾಲೆಗಳು, ಪಾರಂಪರಿಕ ಜಾನಪದ ಕಲೆಗಳು, ಸಾಹಿತ್ಯ, ನೃತ್ಯ, ಸಂಗೀತ, ಚಿತ್ರಕಲೆ, ಕೆತ್ತನೆಗಳು, ವಾಸ್ತುಶಿಲ್ಪ ಮತ್ತಿತರ ಅಸ್ಪಷ್ಟ ಪರಂಪರೆಗಳು ಸನಾತನ ಧರ್ಮದ ಮತ್ತು ಸಂಸ್ಕೃತಿಯ ವಾಹನಗಳು. ಇವುಗಳಿಂದಲೇ ನಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗಳಿಗೆ ಹಸ್ತಾಂತರ ಮಾಡುವುದು ಸಾಧ್ಯ. ಆದರೆ ಹಿಂದಿನ ಪೀಳಿಗೆಯಲ್ಲಿ ಇವುಗಳ ಜವಾಬ್ದಾರಿ ಹೊರುವವರು ಇಲ್ಲದಿದ್ದ ಕಾರಣ ಈ ಕಲೆಗಳು ನಾಶವಾಗುತ್ತಿವೆ. ನಮ್ಮ ಧರ್ಮವನ್ನು ಉಳಿಸಿ ಬೆಳೆಸದಿದ್ದರೆ ನಮ್ಮ ಸಂಸ್ಕೃತಿಗೆ ಬೇರಾಗಿರುವ ಈ ಧರ್ಮವು ನಾಶವಾಗುವುದರಲ್ಲಿ ಸಂಶಯವಿಲ್ಲ. ಇದರೊಂದಿಗೆ ನಮ್ಮ ನಾಗರಿಕತೆಯೂ ಕೂಡ ತೀರಿಕೊಳ್ಳುತ್ತದೆ.  ಈ ದುಃಖಮಯ ಪರಿಸ್ಥಿತಿಗೆ ಸ್ವತಂತ್ರ ಭಾರತದ ಪ್ರಜೆಗಳಾದ ನಾವು ಹಿಂದುಗಳೇ ಜವಾಬ್ದಾರರು.

ಬಿಜೆಪಿ ಪಕ್ಷವು ತನ್ನ 2014ನೆಯ ಚುನಾವಣಾ ಪ್ರಣಾಳಿಕೆಯಲ್ಲಿ ಪಾರಂಪರಿಕ ಸ್ಥಳಗಳು ಎಂಬ ಶಿರೋನಾಮೆಯಲ್ಲಿ ಭಾರತವನ್ನು ಸುದೃಢವಾದ ಸಾಂಸ್ಕೃತಿಕ ಬುನಾದಿಯ ಮೇಲೆ ನಿರ್ಮಾಣ ಮಾಡುತ್ತೇವೆ ಎಂಬ ಆಶ್ವಾಸನೆಯನ್ನು ನೀಡಿತ್ತು. ಅದರಂತೆ ಕೇಂದ್ರ ಸರಕಾರವು ಸರಕಾರಿ ಸಂಸ್ಥೆಯೊಂದನ್ನು ಸ್ಥಾಪಿಸಿ ಅದಕ್ಕೆ “ಹೈಂದವ ಸಂಸ್ಕೃತಿ ಜೀರ್ಣೋದ್ಧಾರಣ ನಿಗಮ ( ಹಿಂದೂ ಸಾಂಸ್ಕೃತಿಕ ಪುನರುತ್ಥಾನ ನಿಗಮ)” ಎಂಬ ನಾಮಕರಣ ಮಾಡಬೇಕು. ಈ ಸಂಸ್ಥೆಗೆ ಪ್ರಾರಂಭದಲ್ಲೇ 10000 ಕೋಟಿ ರೂಪಾಯಿಗಳ ಅನುದಾನ ನೀಡಬೇಕು. ಪ್ರತಿವರ್ಷವೂ ಕೂಡ ಇದೇ ಮೊತ್ತವನ್ನು ನೀಡಬೇಕು. ಈ ನಿಗಮದ ಜವಾಬ್ದಾರಿಯಲ್ಲಿ ಪಾಳುಬಿದ್ದಿರುವ ದೇವಸ್ಥಾನಗಳ ಪುನರುತ್ಥಾನದ ಕೆಲಸ ಹಾಗೂ ವೇದ ಪಾಠಶಾಲೆಗಳು, ವಿವಿಧ ಪಾರಂಪರಿಕ ಜಾನಪದ ಕಲೆಗಳು, ನೃತ್ಯಗಳು, ಸಂಗೀತ, ಶಿಲ್ಪ ಕಲಾ ಶಾಸ್ತ್ರ, ವಾಸ್ತು ಶಿಲ್ಪ ಶಾಸ್ತ್ರ, ಚಿತ್ರಕಲೆ ಇವೇ ಮುಂತಾದವುಗಳಿಗೆ ಪ್ರೋತ್ಸಾಹ ನೀಡಿ ಹಣ ಸಹಾಯ ಮಾಡಬೇಕು. ಇದರಿಂದ ಅನೇಕ ಜನರಿಗೆ ಉದ್ಯೋಗಾವಕಾಶ ಮತ್ತು ಜೀವನೋಪಾಯದ ಅವಕಾಶಗಳು ಕೂಡ ದೊರೆಯುವಂತೆ ಆಗುತ್ತದೆ.

Leave a Reply